ನಮ್ಮ ಬಗ್ಗೆ

ವೃಕ್ಷಮಿತ್ರ ಸ್ನೇಹಿತರು


ಅದ್ಯಾವ ಶುಭ ಗಳಿಗೆಯಲ್ಲಿ ಇಂತದೊಂದು ಚೆಂದದ ಕನಸು ಚಿಗುರೊಡೆಯಿತೋ ಏನೋ.. ವೃಕ್ಷಮಿತ್ರ ಸ್ನೇಹಿತರಾಗಿ ಇದಿವತ್ತು ಇಷ್ಟೊಂದು ಸಂಭ್ರಮದಿಂದ ಸೇರಿರೋ ಈ ಸ್ನೇಹ ಸಮೂಹ 2011ರಲ್ಲಿ ಮೊದಲ ವನಮಹೋತ್ಸವ ಆಚರಿಸುವಾಗ ಕೇವಲ ಏಳೆಂಟು ಜನ ಸಮಾನ ಮನಸ್ಕರಿಂದ ಕೂಡಿತ್ತಷ್ಟೆ. 2007ರಲ್ಲಿ ಚಿಕ್ಕಮಗಳೂರು ಡಯಟ್ನಲ್ಲಿ ಡಿ.ಎಡ್ ಮುಗಿಸಿದ ಸುಮಾರು ನೂರು ಜನರಲ್ಲಿ ಹೆಚ್ಚು ಒಡನಾಡಿಗಳಾಗಿದ್ದ ಏಳೆಂಟು ಜನರು ನಮ್ಮ ಸ್ನೇಹ ಇದಿವತ್ತಿಗೆ ಮುಗಿದು ಹೋಗದಿರಲಿ ಎಂಬ ಉದ್ದೇಶದಿಂದ ಪ್ರತಿ ವರ್ಷದಲ್ಲಿ ಒಂದೆರೆಡು ದಿನ ಬಿಡುವು ಮಾಡಿಕೊಂಡು ಯಾವುದಾದರೂ ಸ್ಥಳಕ್ಕೆ ಟ್ರಿಪ್ ಹೊರಟು ಬಿಡುತ್ತಿದ್ದೆವು. ಹೀಗೆ ಎರಡು ಮೂರು ವರ್ಷದ ಟ್ರಿಪ್ ಮುಗಿಸಿದ ನಮಗೆ ನಾವು ಹೀಗೆ ಗೆಟ್ ಟುಗೆದರ್ ಆಚರಿಸುತ್ತಿರುವುದು ಖುಷಿಯೇನೋ ನೀಡುತ್ತಿದೆ. ಆದ್ರೆ ನಾವು ಸೇರಿದ್ದಕ್ಕೆ ಒಂದು ಕುರುಹು ಉಳಿಯುವಂತೆ ಒಂದೊಳ್ಳೆ ಕೆಲಸ ಮಾಡಿದರೆ ಹೇಗೆ ಎಂದು ಆಲೋಚಿಸಿದಾಗ ಹೊಳೆದದ್ದು ಇದು. ಯಾವುದಾದರೊಂದು ಶಾಲೆಯಲ್ಲಿ ಒಂದಿಷ್ಟು ಗಿಡಗಳನ್ನ ನೆಟ್ಟು ಬೆಳೆಸಿದರೆ ಹೇಗೆ? ಆ ಗಿಡಗಳನ್ನು ಆ ಶಾಲೆಯ ಮಕ್ಕಳ ಸುಪರ್ದಿಗೆ ನೀಡಿ,  ಗಿಡಗಳನ್ನು ಮರವಾಗಿಸಿದರೆ ಹೇಗೆ? ನಮ್ಮ ಗೆಟ್ ಟುಗೆದರ್ ಗೆ ಇದಕ್ಕಿಂತ ಸಾಕ್ಷಿ ಬೇಕೆ? ಚಾನ್ಸೇ ಇಲ್ಲ. ಇದಕ್ಕಿಂತ ಒಳ್ಳೆಯ ಸಮಾಜಮುಖಿ ಕಾರ್ಯ ನಮ್ಮಿಂದಾಗುವುದೇ ಇಲ್ಲ ಅಂತ ನಿರ್ಧರಿಸಿದ ನಾವು 2011ರ ಜುಲೈನಲ್ಲಿ ಬಾದಾಮಿಯ ಶಿರಬಡಗಿ ಶಾಲೆಯಲ್ಲಿ ಮೊದಲ ವರ್ಷದ ವನಮಹೋತ್ಸವ ಆಚರಿಸಿದೆವು. ಅಲ್ಲಿ ಸುಮಾರು 25 ಗಿಡಗಳನ್ನು ನೆಟ್ಟು ಬಂದೆವು. ಕಾರ್ಯಕ್ರಮ ಯಶಸ್ವಿಯಾಯಿತಾದರೂ ಶಾಲೆಯ ಸುತ್ತಲಿನ ಕಾಂಪೌಂಡಿಗೆ ಗೇಟೇ ಇಲ್ಲದ್ದರಿಂದ ಹತ್ತಕ್ಕಿಂತ ಹೆಚ್ಚಿನ ಗಿಡಗಳನ್ನ ಉಳಿಸಿಕೊಳ್ಳಲಾಗಲಿಲ್ಲ. ನಿರಾಸೆಯಾಯಿತಾದರೂ, ಇದು ಮೊದಲ ಹೆಜ್ಜೆಯಲ್ಲವೇ ಎಂದು ಸಮಾಧಾನ ಪಟ್ಟುಕೊಂಡೆವು.


       ಎರಡನೇ ವರ್ಷದ ವನಮಹೋತ್ಸವವನ್ನು 2012ರಲ್ಲಿ ಮುಧೋಳ ತಾಲೂಕಿನ ಕನಸಗೇರಿ ಶಾಲೆಯಲ್ಲಿ ಆಚರಿಸಿದೆವು. ನಮ್ಮ ಡ್ರೀಮ್ ಶೇರಿಂಗ್ ನಿಂದಾಗಿ ಬಳಗದ ಗಾತ್ರ ಹಿಗ್ಗಿತ್ತು. ಬೆಂಗಳೂರಿನ 'ಕಟ್ಟೆ ಗೆಳೆಯರು' ಸೇರಿಕೊಂಡು, ಒಟ್ಟು 28-30 ಜನರ ತಂಡವಾಗಿತ್ತು. ಗ್ರೂಪಿಗೆ 'ವೃಕ್ಷಮಿತ್ರ' ಸ್ನೇಹಿತರು ಅಂತ ಚೆಂದದ ಹೆಸರಿಟ್ಟುಕೊಂಡೆವು. ಕುಡಿಯೋ ನೀರಿಗೂ ಪರದಾಡುತ್ತಿದ್ದ ಆ ಊರಲ್ಲಿ ನೆಟ್ಟ 65 ಗಿಡಗಳಲ್ಲಿ 50ಕ್ಕೂ  ಹೆಚ್ಚು ಗಿಡಗಳು ಚೆನ್ನಾಗಿಯೇ ಬೆಳೆದಿವೆ ಎಂಬುದು ನಿಜಕ್ಕೂ ಖುಷಿಯ ವಿಚಾರ.

        ಅದೇ ರೀತಿ 2013ರಲ್ಲಿ ಮೂರನೇ ವರ್ಷದ ವನಮಹೋತ್ಸವವನ್ನ ಅರಸೀಕೆರೆ ತಾಲೂಕಿನ ಕೆ.ಗೊಲ್ಲರಹಟ್ಟಿಯ ಶಾಲೆಯಲ್ಲಿ ಆಚರಿಸುವಾಗ ಸ್ನೇಹಿತರ ಸಂಖ್ಯೆ 41 ಆಗಿತ್ತು. ಅವತ್ತಲ್ಲಿ 120 ಗಿಡಗಳನ್ನ ನೆಡುವುದರೊಂದಿಗೆ ಉಡುಪಿಯ ಗುರುರಾಜ್ ಸನಿಲ್ ಅವರೂ ಸೇರಿದಂತೆ ಮೂರ್ನಾಲ್ಕು ಉರಗ ತಜ್ಞರನ್ನು ಕರೆಸಿ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಹಾವುಗಳ ಬಗೆಗಿನ ಅನಗತ್ಯ ಭಯ ಹೋಗಲಾಡಿಸಿ, ಜನರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಆಕಸ್ಮಿಕವಾಗಿ ವಿಷಯುಕ್ತ ಹಾವುಗಳು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಯ  ಬಗ್ಗೆ ಅರಿವು ಮೂಡಿಸಲಾಯಿತು. ಈ ಮೂರನೇ ವರ್ಷದ ಶಾಲೆಯಲ್ಲಿ ನೆಟ್ಟ 120 ಗಿಡಗಳಲ್ಲಿ 108 ಗಿಡಗಳು ಅದೆಷ್ಟು ಹಚ್ಚ ಹಸಿರಾಗಿವೆಯೆಂದರೆ ಶಾಲೆಗೆ ಭೇಟಿ ನೀಡಿದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು, ಅಬ್ಬಾ! ಶಾಲೆ ಕೇವಲ ಎರಡು ವರ್ಷಗಳಲ್ಲಿ ಅದೆಷ್ಟು ಬದಲಾವಣೆ ಕಂಡಿದೆ ಎಂದು ಶಾಲೆಗೆ ಪ್ರಶಂಸಾ ಪತ್ರ ಕಳಿಸಿಕೊಟ್ಟರು. ನಮ್ಮ ಕನಸಿಗೆ ಮತ್ತಿನ್ಯಾವ ಬಿರುದು ಬೇಕು ಹೇಳಿ..

       ಮುಂದಿನ ವನಮಹೋತ್ಸವ 2014ರಲ್ಲಿ ಕಡೂರು ತಾಲೂಕಿನ ಸರಸ್ವತಿಪುರ ಶಾಲೆಯಲ್ಲಿ ನಡೆಯಿತು. ಸ್ನೇಹಿತರ ಸಂಖ್ಯೆ 50ರ ಗಡಿ ದಾಟಿತ್ತು. ವೃಕ್ಷಮಾತೆ 'ಸಾಲುಮರದ ತಿಮ್ಮಕ್ಕ'ನವರು ಮುಖ್ಯ ಅತಿಥಿಯಾಗಿದ್ದ ಈ ಶಾಲೆಯಲ್ಲಿ ಸುಮಾರು  275 ಗಿಡಗಳನ್ನು ನೆಟ್ಟೆವು. ವನಮಹೋತ್ಸವದ ದಿನ ಬಂದಿದ್ದ ನಮ್ಮ ಸ್ನೇಹಿತರೇ ಕೆಲವರು ಅಲ್ಲಿಯ ಬರಡು ನೆಲ ನೋಡಿ, 'ಗಿಡ ನೆಡೋದು ಇಲ್ಲಾ!' ಅಂತ ಹುಬ್ಬೇರಿಸಿದ್ದರು. ಇಂಥ ಶಾಲೆಯಲ್ಲೂ ಶೇ.80ಕ್ಕೂ ಹೆಚ್ಚು ಫಲಿತಾಂಶ ಸಿಕ್ಕಿದ್ದು ಶಾಲೆಯ ಮಕ್ಕಳು ಮತ್ತು ಸಿಬ್ಬಂದಿಗಳಿಂದ.

       ಅದರಂತೆ 2015ರ ನಮ್ಮ ವನಮಹೋತ್ಸವ ತಿಪಟೂರು ತಾಲೂಕಿನ ಕೊನೇಹಳ್ಳಿ ಗ್ರಾಮದ ಶ್ರೀ ರಂಗನಾಥ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು.. ಖ್ಯಾತ ಸಾಹಿತಿ ಜೋಗಿಯವರು ಹಾಗೂ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದ ಈ ಶಾಲೆಯಲ್ಲಿ ಸುಮಾರು 185  ಗಿಡಗಳನ್ನು ನೆಡಲಾಯಿತು. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಮ್ಮ ಆ ಗಿಡಗಳನ್ನು ಎಷ್ಟು ಚೆಂದ ನೋಡಿಕೊಂಡರೆಂದರೆ ಇನ್ನೆರೆಡು ಮೂರು ವರ್ಷಗಳಲ್ಲಿ ಅದು, ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಿಗುವ ಪ್ರಮುಖ ಪಾರ್ಕ್‌ನಂತಾಗುವುದರಲ್ಲಿ ಅನುಮಾನವಿಲ್ಲ. ಅವರ ಪ್ರೀತಿಗೆ ನಾವು ಸದಾ ಕೃತಜ್ಞರು..

ನಮ್ಮ ವನಮಹೋತ್ಸವ-2016ನ್ನು 2016ರ ಜುಲೈ ಎರಡನೇ ಶನಿವಾರದಂದು ಕಡೂರು ತಾಲೂಕಿನ ಗಿರಿಯಾಪುರದ ಶ್ರೀ ಗುರುಕೃಪಾ ಪ್ರೌಢಶಾಲೆಯಲ್ಲಿ ಆಚರಿಸಲಾಯಿತು. ಪರಿಸರ ಪ್ರೇಮಿ ಗಿರೀಶ್ ಹೊಳ್ಳರವರು ಹಾಗೂ ಲೀವ್ ಗ್ರೀನ್ ಸಂಸ್ಥೆಯ ಸ್ಥಾಪಕರಾದ ಪ್ರಮೋದ್ ಸಿದ್ಧಗಂಗಯ್ಯನವರು ವಿಶೇಷ ಅತಿಥಿಗಳಾಗಿದ್ದ ಈ ಶಾಲೆಯಲ್ಲಿ ವೃಕ್ಷಮಿತ್ರ ಸ್ನೇಹಿತರಿಂದ ಸುಮಾರು 180  ಗಿಡಗಳನ್ನು ನೆಟ್ಟು, ಅವುಗಳ ಆರೈಕೆಯ ಜವಾಬ್ದಾರಿಯನ್ನು ಶಾಲಾ ಶಿಕ್ಷಕರು, ಮಕ್ಕಳಿಗೆ ವಹಿಸಿಕೊಟ್ಟು ಬಂದಿದ್ದೆವು. ಆದರೆ ಅವರ ಆಸಕ್ತಿ ಎಂಟತ್ತು ದಿನಗಳಲ್ಲೆ ತಿಳಿದು ಹೋಯಿತು. ಕಾರ್ಯಕ್ರಮ ಆಚರಿಸಲು ಇದ್ದ ಆಸಕ್ತಿಯಲ್ಲಿ ಶೇಕಡಾ 50 ರಷ್ಟನ್ನ ಆ ಗಿಡಗಳನ್ನ ಉಳಿಸುವಲ್ಲಿ ತೋರಿಸಿದ್ದರೂ ಸಾಕಿತ್ತು. ನಮ್ಮ ಗಿಡಗಳು ಬದುಕಿ ಬಿಡುತ್ತಿದ್ದವು. ಸಣ್ಣಪುಟ್ಟ ಮುರಿದುಬಿದ್ದ ಬೇಲಿಗಳನ್ನು ಸರಿಪಡಿಸಲೂ ಮುಂದಾಗಲಿಲ್ಲ. ಇದ್ಯಾಕೋ ಸರಿಯಾಗಲಿಲ್ಲವೆಂದೆಣಿಸಿದ ನಾವು ಅದೇ ವರ್ಷ ಜುಲೈ 23ರಂದು ಕಡೂರು ತಾಲೂಕಿನ ನಾಗೇನಹಳ್ಳಿಯ ಶ್ರೀ ಆಂಜನೇಯ ಪ್ರೌಢಶಾಲೆಯಲ್ಲಿ ಸರಳವಾಗಿ ಆಚರಿಸಿ 126  ಗಿಡಗಳನ್ನ ನೆಟ್ಟೆವು. ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಸಕ್ತಿ ಎಷ್ಟಿತ್ತೆಂದರೆ ಶಿಕ್ಷಕರು ಮತ್ತು ಮಕ್ಕಳು ಕರಪತ್ರಗಳೊಂದಿಗೆ ಶಾಲೆಯ ಪಕ್ಕದೂರಿನ ಪ್ರತಿ ಮನೆ ಮನೆಗಳಿಗೂ ಹೋಗಿ ರಾಜಕಾರಣಿಗಳು ಓಟುಗಳನ್ನ ಬೇಡುವಂತೆ ನಮ್ಮ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳನ್ನ ನಿಮ್ಮ ದನ-ಕುರಿಗಳು ತಿನ್ನದಂತೆ ನೋಡಿಕೊಳ್ಳಿ ಎಂದು ಬೇಡಿಕೊಂಡು ಬಂದರು. ವರ್ಷವಿಡೀ ಬರಗಾಲವೇ ಆವರಿಸಿದ್ದ ಆ ಶಾಲೆಯಲ್ಲಿ 103 ಗಿಡಗಳು ಇವತ್ತಿಗೂ ಉಳಿದಿದ್ದು, ಒಣಗಿ ಹೋದ ಗಿಡಗಳ ಬದಲಿಗೆ ಬೇರೆ ಗಿಡಗಳನ್ನ ನೆಡುವುದಕ್ಕಾಗಿ ಈ ವರ್ಷದ ಮಳೆ ಕಾಯುತ್ತಿದ್ದಾರೆ.

    ನಿಜಕ್ಕೂ ಕಳೆದ ಆರು ವರ್ಷಗಳಲ್ಲಿ ನಮಗೆ ಎಲ್ಲಾ ತರದ ಅನುಭವಗಳೂ ಆಗಿವೆ. ಅಜ್ಜಿಯ ಮನೆಗೆ ಹೊರಡಿಸಿ ನಿಂತ ಮಗಳು, ಅಪ್ಪನನ್ನು ಶಾಲೆಗೆ ಕರೆ ತಂದು 'ನೀನು ಇನ್ನೆರೆಡು ದಿನ ಬಂದು ನನ್ನ ಈ ಗಿಡಕ್ಕೆ ನೀರು ಹಾಕಿ ನೋಡಿಕೊಳ್ತಿಯೆಂದು ಪ್ರಾಮಿಸ್ ಮಾಡಿದ್ರೆ ಮಾತ್ರ ನಾನು ಅಮ್ಮನ್ಜೊತೆ ಹೋಗ್ಬರ್ತೀನಿ' ಅಂತ ನಿಬಂಧನೆಯೊಡ್ಡಿದ ಮೂರನೇ ತರಗತಿಯ ಹೆಣ್ಮಗಳಂತವರೂ ಸಿಕ್ಕಿದ್ದಾರೆ. ನಾವು ಕುಡಿಯೋ ನೀರೆಲ್ಲಾ ಈ ಗಿಡಗಳಿಗೆ ಹಾಕಿ ವೇಸ್ಟ್ ಮಾಡ್ತಾರೆ. ಗಿಡಗಳಿದ್ದರೆ ತಾನೇ ಇದೆಲ್ಲಾ ಅಂತ ರಾತ್ರೋ ರಾತ್ರಿ ಬಂದು ಗಿಡಗಳನ್ನೆಲ್ಲ ಕಿತ್ತು ಒಂದೆಡೆ ರಾಶಿ ಹಾಕಿದ್ದ ದೊಡ್ಡವರೂ ಸಿಕ್ಕಿದ್ದಾರೆ. ಆದ್ರೆ ನಮಗೆ ಇನ್ನಷ್ಟು ಹುಮ್ಮಸ್ಸು ತುಂಬಿ, 'ನಾವಿದ್ದೇವೆ, ನೀವು ಗಿಡ ನೆಟ್ಟು ನಮಗೆ ಕೊಡಿ. ಉಳಿಸಿ ಬೆಳೆಸುತ್ತೇವೆ' ಎಂದ ಮಕ್ಕಳೇ ನಮ್ಮ ವೃಕ್ಷಮಿತ್ರ ಸ್ನೇಹಿತರನ್ನೆಲ್ಲಾ ಏಳನೇ ವರುಷಕ್ಕೆ ಈ ಶಾಲೆಗೆ  ಕರೆತಂದಿದೆ.

*"'ಕನಸಷ್ಟೆ ನಮ್ಮದು. ನನಸಾಗಿಸೋ ಹೊಣೆ ನಿಮ್ಮದು'"*

No comments:

Post a Comment