Wednesday 12 July 2017

ವನಮಹೋತ್ಸವ-2017

ವೃಕ್ಷಮಿತ್ರ ಸ್ನೇಹಿತರ 'ವನಮಹೋತ್ಸವ-2017
 ಶ್ರೀ ಕೊಟ್ಟೂರೇಶ್ವರ ಶಾಲಾ ಕಾಲೇಜು ಆವರಣ, ಗಂಗಾವತಿ


🌱ವೃಕ್ಷಮಿತ್ರ🌱 Vruksha Mitra ಸ್ನೇಹಿತರ ವನಮಹೋತ್ಸವ-2017ನ್ನ ಆದಷ್ಟು ಸರಳವಾಗಿ, ಯಾವುದೇ ಗಣ್ಯ ವ್ಯಕ್ತಿಗಳ ಬೆನ್ನು ಬೀಳದೆ ಕಾರ್ಯಕ್ರಮ ಆಚರಿಸುವುದೆಂದುಕೊಂಡೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ಶಾಲೆಯನ್ನ ಆರಿಸಿಕೊಂಡಿದ್ದೆವು..











🌱ವೃಕ್ಷಮಿತ್ರ🌱 ವನಮಹೋತ್ಸವ ನನ್ನ ಪಾಲಿಗಂತೂ ಹಬ್ಬವೇ ಸರಿ.. ಯಾವುದರಲ್ಲಿಯೂ ಮುಂದೆ ಹೋಗಲು, ನಾಯಕನಾಗಲು ಇಷ್ಟಪಡದ ನಾನು ಇದರಲ್ಲಿ ಮಾತ್ರ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತೇನೆ. ಆದರೂ ನನಗೆ ಇದರ ನಾಯಕನೆನಿಸಿಕೊಳ್ಳಲು ಮನಸಿಲ್ಲ. ನಿನ್ನೆಯ ಪತ್ರಿಕೆಯೊಂದರಲ್ಲಿ ವೃಕ್ಷಮಿತ್ರ ಮುಖ್ಯಸ್ಥ ಸುರೇಶ.ಟಿ.ಡಿ ಎಂಬುದಾಗಿ ವರದಿಯಾಗಿದೆ. ಆ ವರದಿಗಾರನಿಗೆ ನನ್ನ ಹೆಸರು ಹೇಳಿದ ಪುಣ್ಯಾತ್ಮರು ಯಾರೋ ಗೊತ್ತಿಲ್ಲ. Don't work for recognition, but do work worthy of recognition ಎಂಬುದರಲ್ಲಿ ನಂಗೆ ಸಂಪೂರ್ಣ ಒಪ್ಪುಗೆ ಮತ್ತು ಅಪ್ಪುಗೆ ಎರಡೂ ಇವೆ. ಇದು ಏಳನೇ ವರ್ಷದ ಕಾರ್ಯಕ್ರಮ. ಪ್ರತಿ ವರ್ಷವೂ ಈ ದಿನಕ್ಕಾಗಿಯೇ ಹೊಸ ಬಟ್ಟೆ ಖರೀದಿಸುವುದರಿಂದ ಹಿಡಿದು ಹಲವು ಪೂರ್ವ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದೆ. ಈ ವರ್ಷ ಒಂದಷ್ಟು ಸರಳತೆಯನ್ನ ಮೈಗೂಡಿಸಿಕೊಳ್ಳೋಣ ಅಂತಲೇ ಅವ್ಯಾವುದನ್ನು ಮಾಡಿರಲಿಲ್ಲ. ಸ್ಟೇಜಿಗೆ ನೇತುಬಿಡಲು ಕೂಡಾ ಒಂದು ಹೊಸ ಬ್ಯಾನರ್ ಮಾಡಿಸಿರಲಿಲ್ಲ. ಹಳೆಯ ಬ್ಯಾನರ್‌ಗೇನೆ ಹೊಸ ಶಾಲೆಯ ಹೆಸರು ಮತ್ತು ದಿನಾಂಕವನ್ನ ತಿದ್ದಿಸಿಬಿಟ್ಟೆ.. ಪ್ರತಿ ವರ್ಷವೂ ಹಲವರನ್ನ ಫೋನ್ ಮಾಡಿ ಮಾಡಿ ಕಾರ್ಯಕ್ರಮಕ್ಕೆ ಕರೆತರುತ್ತಿದ್ದೆ. ಆದ್ರೆ ಈ ಸಲ ಅಷ್ಟೊಂದೇನೂ ಯಾರನ್ನೂ ಕಾಡಲಿಲ್ಲ.. ಕಾರ್ಯಕ್ರಮದ ಬಗ್ಗೆ ಮಾಹಿತಿಗಳು ತಲುಪುವಂತೆ ನೋಡಿಕೊಂಡಿದ್ದೇನೆ. ಆಸಕ್ತರು ಬಂದಿದ್ದಾರೆ.. ಮಾವಿನಹಣ್ಣನ್ನ ಅದರಷ್ಟಕ್ಕೆ ಹಣ್ಣು ಮಾಡಲು ಬಿಟ್ಟರೆ ರುಚಿ ಜಾಸ್ತಿ. ಪದೇ ಪದೇ ಹಿಸುಕಿ ನೋಡುತ್ತಿರಬಾರದು ಎಂಬುದು ಅದ್ಯಾಕೋ ಅರ್ಥವಾಗಿತ್ತು..




ಈ ವರ್ಷದ ಶಾಲೆಯಲ್ಲಿ ವಿವಿಧ ಜಾತಿಯ ಒಟ್ಟು 150 ಗಿಡಗಳನ್ನ ನೆಟ್ಟಿದ್ದೇವೆ. ಇದೇ ಮೊದಲ ಬಾರಿಗೆ ಗಿಡಗಳಿಗೆ ಟ್ರೀ ಗಾರ್ಡ್ ತೊಡಿಸಿದ್ದೇವೆ. ನೀರಿಗಂತೂ ಬರವಿದ್ದಂತೆ ಕಾಣಲಿಲ್ಲ. ಈ ವರ್ಷದ ಸಕ್ಸಸ್ ರೇಟು ಜಾಸ್ತಿ ಇರಲೇಬೇಕು ಅಂತ ನಿರ್ಧಾರ ಮಾಡಿದ್ದೇವೆ ಮತ್ತು ಆಗುತ್ತದೆ ಎಂಬ ಆಶಾಭಾವನೆಯಲ್ಲಿದ್ದೇವೆ..




















ಮತ್ತೆ ಸಭಾ ಕಾರ್ಯಕ್ರಮ ಮಾಡುವುದರ ಹಿಂದಿನ ಉದ್ದೇಶವಿಷ್ಟೆ. ನಮ್ಮಂತೆಯೇ ಅಲ್ಲೊಂದು ಇಲ್ಲೊಂದು ಸಂಘಟನೆಗಳು ಗಿಡ ನೆಟ್ಟ ತಕ್ಷಣಕ್ಕೆ ಜಗತ್ತು ಹಸಿರಾಗುವುದಿಲ್ಲ. ಪ್ರತಿಯೊಬ್ಬರಲ್ಲೂ ಹಸಿರ ಪ್ರಜ್ಞೆ ಮೂಡಿಸಬೇಕಿದೆ. ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಅದು ಹಲವರಿಗೆ ಪ್ರೇರಣೆಯಾಗುತ್ತೆ. ಯಾರೋ ಅಲ್ಲಿ ಇಲ್ಲಿ ಒಬ್ಬರೊಬ್ಬರು ನಿಮ್ಮಂತೆಯೇ ನಮ್ಮದೊಂದು ತಂಡ ಕಟ್ಟಿಕೊಂಡಿದ್ದೇವೆ ಅಂತಲೋ, ನಾನು ಒಬ್ಬನೇ ಇಷ್ಟು ಗಿಡ ನೆಟ್ಟಿದ್ದೇನೆ, ಅವನ್ನ ಉಳಿಸುತ್ತೇನೆ ಅಂತಲೋ ಅಂದಾಗ ಖುಷಿಯೆನಿಸುತ್ತೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ ಕೂಡಾ. ಆದ್ರೆ ಅದು ಸರಳವಾಗಿರುವಂತೆ ನೋಡಿಕೊಳ್ಳಬೇಕು. ಮೂಗಿಗಿಂತ ಮೂಗು ನತ್ತೇ ತೂಕವಿಲ್ಲದಂತೆ ನೋಡಿಕೊಳ್ಳಬೇಕು. ಸಭಾ ಕಾರ್ಯಕ್ರಮಕ್ಕೆ ಕೊಡುವುದಕ್ಕಿಂತ ಹಲವು ಪಟ್ಟು ಆಸಕ್ತಿಯನ್ನ ಗಿಡಗಳನ್ನ ನೆಡಲು ಹಾಗೂ ಉಳಿಸಿಕೊಳ್ಳಲು ಕೊಡಬೇಕು.. ಅದಕ್ಕಾಗಿ ಈ ವರ್ಷದ ಕಾರ್ಯಕ್ರಮ ಸರಳವಾಗಿರಬೇಕು. ಯಾವುದೇ ಸ್ಟೇಜು, ಅಲಂಕಾರಗಳೆಲ್ಲ ಬೇಡ ಅಂತ ಎಷ್ಟೇ ಹೇಳಿದರೂ ಶಾಲೆಯ ಆಡಳಿತ ಮಂಡಳಿಯವರು ಒಂದಷ್ಟು ವ್ಯವಸ್ಥೆಗಳನ್ನ ಮಾಡಿದ್ದರು. ಯಾವುದೂ ಅತಿಯಾಗದಂತೆ ನಾವು ನೋಡಿಕೊಂಡಿದ್ದೆವು.. ಸ್ಟೇಜಿನ ತುಂಬಾ ಗಣ್ಯರು ಕುಳಿತಿದ್ದರಾದರೂ ಮಾತಾಡಿದವರು ಮೂವರಷ್ಟೆ. ಔಪಚಾರಿಕವಾಗಿ ಕೆಲವರಿಗೆ ಒಂದೆರೆಡು ಮಾತಾಡಿ ಅಂತ ಕೇಳಿಕೊಂಡಾಗ, "ನಾವು ಮಾತಾಡಬಾರದು. ನಮ್ಮ ಕೆಲಸಗಳು ಮಾತಾಡಬೇಕು" ಅಂತಂದು ದೊಡ್ಡವರೆನಿಸಿಕೊಂಡು ಬಿಟ್ಟರು. ಒಟ್ಟಾರೆ ಕಾರ್ಯಕ್ರಮ ನಾವಂದುಕೊಂಡಷ್ಟಲ್ಲದಿದ್ದರೂ ಸರಳವಾಗೇ ಆಗಿಹೋಯಿತು..






















ಕಾರ್ಯಕ್ರಮದ ಅತಿಥಿಗಳ ಬಗ್ಗೆ ಹೇಳುವುದಾದರೆ ಎಲ್ಲರೂ ವಿಶೇಷ ವ್ಯಕ್ತಿಗಳೆ. ಎಲ್ಲರೂ ತಮ್ಮ ತಮ್ಮ ಕಾರ್ಯಗಳಿಂದ ಗುರುತಿಸಿಕೊಂಡವರೆ. *ಪೊಂಪಯ್ಯ ಮಳೇಮಠ* ಸರ್, *ಶಿವಶಂಕರ್ ಬಣಗಾರ್* ಸರ್ ಮುಂತಾದವರೆಲ್ಲ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮೆಚ್ಚುವಂತ ಸಾಧನೆಗಳನ್ನ ಮಾಡಿದ್ದಾರೆ. ಇವರೆಲ್ಲರೂ ನಮ್ಮೊಡನಿದ್ದದ್ದು ಖುಷಿ ತಂದಿತು. ಅದೆಲ್ಲದಕ್ಕಿಂತ ಮುಖ್ಯವಾಗಿ ಹೇಳಬೇಕಾಗಿದ್ದು *ಗಂಗಾವತಿ ಪ್ರಾಣೇಶ್* ಸರ್ ಬಗ್ಗೆ. ಗಂಗಾವತಿಯಲ್ಲಿ ಕಾರ್ಯಕ್ರಮ ಮಾಡ್ತಿರುವಾಗ ಗಂಗಾವತಿ ಪ್ರಾಣೇಶ್‌ರವರಿಗೆ ಕರೆಯದಿದ್ದರೆ ಹೇಗೆ ಅಂತ ಗೆಳೆಯ *ಪ್ರಶಾಂತ್ ಕರೀಕೆರೆ* ಅವ್ರು ಪ್ರಾಣೇಶ್ ಸರ್‌ಗೆ ಫೋನ್ ಮಾಡಿ ವಿಷ್ಯ ತಿಳಿಸಿ, ಬನ್ನಿ ಅಂತ ಕರೆದಿದ್ದಾರೆ. ನೋಡೋಣ, ಕಾರ್ಯಕ್ರಮದ ಒಂದೆರೆಡು ದಿನಗಳ ಮೊದಲು ನೆನಪು ಮಾಡಿ ಅಂತ ಅವರಂದಿದ್ದಾರೆ. ಪ್ರಶಾಂತ್ ಅವ್ರು ನಂಗೆ ಆ ವಿಚಾರ ತಿಳಿಸಿ ನೀವೊಮ್ಮೆ ಅಹ್ವಾನ ಮಾಡಿ ಅಂತ ಹೇಳಿದ್ದರಾದರೂ, ಅವರೆಲ್ಲಿ ಬರ್ತಾರೆ ಬಿಡು ಅಂತಂದುಕೊಂಡು ನಾನು ಸುಮ್ಮನಾಗಿ ಬಿಟ್ಟಿದ್ದೆ. ಕಾರ್ಯಕ್ರಮ ಶುರುವಾಗುವ ಹತ್ತು ನಿಮಿಷ ಮೊದಲು ಪ್ರಶಾಂತ್ ಅವ್ರಿಗೆ ಪ್ರಾಣೇಶ್ ಸರ್ ಅವರೇ ಫೋನ್ ಮಾಡಿ, ಈಗಷ್ಟೇ ಬೆಂಗಳೂರಿಂದ ಬಂದೆ, ಸ್ವಲ್ಪ ಫ್ರೆ಼ಷ್ ಆಗಿ ಬಂದು ಬಿಡ್ತೀನಿ. ನಂಗೋಸ್ಕರ ಕಾಯೋದು ಬೇಡ ಕಾರ್ಯಕ್ರಮ ಶುರುಮಾಡಿ ಅಂತೇಳಿದವ್ರು ಕಾರ್ಯಕ್ರಮದ ಉದ್ಘಾಟನೆಯಾಗಿತ್ತಷ್ಟೆ ಬಂದುಬಿಟ್ಟರು.. ಕಾರ್ಯಕ್ರಮಕ್ಕೆ ಮೆರುಗು ತಂದರು.. ವೃಕ್ಷಮಿತ್ರರನ್ನು ಕಂಡು ಖುಷಿ ಪಟ್ಟರು. ಹೊರಡುವ ಮುನ್ನ ಎಲ್ಲರೂ ನಮ್ಮನೆಗೆ ಬಂದು ಹೋಗಿ ಅಂತ ಪ್ರೀತಿಯಿಂದ ಅಹ್ವಾನಿಸಿದರು.. ನಾವೂ ಅಷ್ಟೇ ಪ್ರೀತಿಯಿಂದ ಹೋಗಿ "ಸ್ವಾಮಿ ಕುಟೀರ" ನೋಡಿ ಬಂದೆವು.

ಇನ್ನು ಕೊನೆಯದಾಗಿ ವೃಕ್ಷಮಿತ್ರ ಸ್ನೇಹಿತರಾಗಿ ಬಂದವರ ಬಗ್ಗೆ ಹೇಳುವುದಾದರೆ, ಯಾವುದ್ಯಾವುದೋ ಬಸ್ ಮಿಸ್ ಮಾಡ್ಕೊಂಡು ಮಧ್ಯರಾತ್ರಿಯಲ್ಲಿ *ಸಿದ್ದು* ಗಂಗಾವತಿ ತಲುಪಿ ಹಾಜರಿ ಹೇಳಿಬಿಟ್ಟ. ನಿನ್ನ ಆರೋಗ್ಯ ಇನ್ನಷ್ಟು ಸುಧಾರಣೆಯಾಗಲಿ ಈ ವರ್ಷ ನೀ ಬರೋದು ಬೇಡ ಅಂದರೂ *ಸಹನಾ* ತನ್ನ ಪತಿಯೊಡನೆ ಬಂದಳು. ಚಿಕ್ಕಮಗಳೂರಿಂದ ನಾನೊಬ್ಬನೇ ಎನ್ನುವಂತೆ *ಸತಿ* ಬಂದ. *ದಿನೇಶ್, ಶಿವು, ಪ್ರಶಾಂತ್, ಅನಿಲ್, ರೆಡ್ಡಿ* ಅವ್ರೆಲ್ಲ ಗುಂಪು ಕಟ್ಟಿಕೊಂಡು ಬಂದ್ರು. *ಸತೀಶ್ ನರಸಿಂಹಯ್ಯ* ಸರ್ ಅವ್ರ ಗೆಳೆಯ *ವಿಶ್ವನಾಥ್* ಅವ್ರನ್ನ ಮೊದಲ ಬಾರಿಗೆ ವೃಕ್ಷಮಿತ್ರ ಕಾರ್ಯಕ್ರಮಕ್ಕೆ ಪರಿಚಯಿಸಿದ್ರು. *ರಾಖಿ* ಬೆಂಗಳೂರಿಂದ ತನ್ನ ಟೀಮ್ ಕಟ್ಟಿಕೊಂಡು ಬಂದ್ರು. ಅದ್ರಲ್ಲಿ ಇಬ್ಬರು ದಂಪತಿಗಳ ಸಮೇತ ಬಂದಿದ್ದು ವಿಶೇಷ. ಯಾವತ್ತೂ ಗ್ಯಾರೆಂಟಿ ಉಳಿಸಿಕೊಳ್ಳದ *ರವಿ*, ಬಂದು ನಂಬಿಕೆ ಮೂಡಿಸಿದ. ಸರ್ಪ್ರೈಸ್ ಕೊಡ್ಬೇಕು ಅಂತ ಪ್ಲಾನ್ ಮಾಡಿಕೊಂಡ *ಸುಮಂತ್* ಸರಿಯಾದ ಪ್ಲಾನ್ ಇಲ್ಲದೆ ಮಧ್ಯಾಹ್ನದೊತ್ತಿಗೆ ನಮ್ಮನ್ನ ಸೇರಿಕೊಂಡ. *ಮೂರ್ತಿ* ಸರ್ ನಂಗೆ ಬಿಡುವಿಲ್ಲ ಅಂತೇಳಿ *ಸುನಿಲ್* ಎಂಬ ತನ್ನ ರಾಯಭಾರಿಯನ್ನ ಕಳಿಸಿಕೊಟ್ಟಿದ್ರು. ನಿಜಕ್ಕೂ ಇವರೆಲ್ಲರ ಉಪಸ್ಥಿತಿ ಅನಿವಾರ್ಯವಾಗಿ ಬೇಕಾಗಿತ್ತು. ಪ್ರೀತಿಯಿಟ್ಟು ಬಂದದ್ದಕ್ಕೆ ಎಲ್ಲರಿಗೂ ಪ್ರೀತಿಯ ದಮ್ಮಯ್ಯ..

ಕಾರ್ಯಕ್ರಮವನ್ನ ತನ್ನ ಹೆಗಲಿಗೇರಿಸಿಕೊಂಡು ವಿಶೇಷ ಆಸ್ಥೆವಹಿಸಿ ಯಶಸ್ವಿಗೊಳಿಸಿಕೊಟ್ಟವರು ಗಂಗಾವತಿಯ ಉಪ ವಲಯ ಅರಣ್ಯಾಧಿಕಾರಿ *ನಾಗರಾಜ್* ಸರ್ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಾದ *ಪಾಟೀಲ್* ಸರ್.. ಇವರಿಬ್ಬರಿದಿದ್ದರೆ ನಿಜಕ್ಕೂ ಕಾರ್ಯಕ್ರಮವಾಗುತ್ತಿರಲಿಲ್ಲ..
 ===========================================================================
Government Higher Primary School, Karadona, Gangavathi Tq
Date : 07th July 2017

















 ಎಲ್ಲರಿಗೂ ��ವೃಕ್ಷಮಿತ್ರ��ರೆಲ್ಲರ ಪರವಾಗಿ ಪ್ರೀತಿಯ ನಮಸ್ಕಾರಗಳು.. 
*14 ಜುಲೈ 2018* ಕ್ಕೆ ಮತ್ತೊಂದು ವನಮಹೋತ್ಸವ ಕಾರ್ಯಕ್ರಮಕ್ಕೆ ಇಷ್ಟೆ ಸಂಭ್ರಮದಿಂದ ಸೇರೋಣ